ಕ್ರಿಸ್ಮಸ್ ದ್ವೀಪಗಳು 

	ಕ್ರಿಸ್ಮಸ್ ಎಂಬ ಹೆಸರಿನ ಎರಡು ದ್ವೀಪಗಳಿವೆ. ಒಂದು ಪೆಸಿಫಿಕ್ ಸಾಗರದಲ್ಲಿದೆ. ಮತ್ತೊಂದು ಹಿಂದೂ ಸಾಗರದಲ್ಲಿದೆ.

ಪೆಸಿಫಿಕ್ ಸಾಗರದ ಮಧ್ಯದಲ್ಲಿರುವ ಕ್ರಿಸ್ಮಸ್ ದ್ವೀಪ ಭೂಮಧ್ಯರೇಖೆಯ ಉತ್ತರಕ್ಕೆ ಹವೈಯಿ ದ್ವೀಪಗಳ ದಕ್ಷಿಣಕ್ಕೆ (ಉ.ಅ. 2ಲಿ, ಪ.ರೇ. 157ಲಿ) ಇದೆ. ಇಲ್ಲಿನ ಉಪ್ಪು ಸರೋವರಗಳನ್ನೂ ಸೇರಿಸಿಕೊಂಡಲ್ಲಿ ಒಟ್ಟು ದ್ವೀಪದ ವಿಸ್ತೀರ್ಣ 220 ಚ.ಮೈ. ಇದು ಪೆಸಿಫಿಕ್ ಸಾಗರದಲ್ಲಿರುವ ಹವಳ ದ್ವೀಪಗಳಲ್ಲೆಲ್ಲ ದೊಡ್ಡದು. ಜೇಮ್ಸ್ ಕುಕ್ 1777ರ ಡಿಸೆಂಬರ್‍ನಲ್ಲಿ ಗುರುತಿಸಿದ. ಈ ದ್ವೀಪ 1888ರಲ್ಲಿ ಗ್ರೇಟ್ ಬ್ರಿಟನಿಗೆ ಸೇರಿತು. 1919ರ ನವೆಂಬರ್‍ನಲ್ಲಿ ಗಿಲ್ಬರ್ಟ್ ಮತ್ತು ಎಲಿಸ್ ದ್ವೀಪಗಳ ಕಾಲೋನಿಯೊಂದಿಗೆ ವಿಲೀನಗೊಂಡಿತು. ಈ ದ್ವೀಪ ತನಗೆ ಸೇರಬೇಕೆಂದು ಅಮೆರಿಕ ಸಂಯುಕ್ತ ಸಂಸ್ಥಾನ ಒಂದು ಶತಮಾನದಿಂದಲೂ ಹೇಳುತ್ತಿದೆ. ಆರ್ಥಿಕ ದೃಷ್ಟಿಯಿಂದ ಈ ದ್ವೀಪಕ್ಕೆ ಯಾವ ಮಹತ್ತ್ವವೂ ಇಲ್ಲ. ಇರುವ ಮಹತ್ತ್ವವೆಲ್ಲ ಇದು ನೆಲೆಗೊಂಡಿರುವ ಸ್ಥಳದಿಂದಾಗಿದೆ. ಇಲ್ಲಿ ಗಿಲ್ಬರ್ಟ್ ದ್ವೀಪಕ ಕಾರ್ಮಿಕರು ಅಪಾರವಾಗಿ ತೆಂಗನ್ನು ಬೆಳೆಯುತ್ತಿದ್ದಾರೆ. ಇತ್ತೀಚೆಗೆ ಬ್ರಿಟಿಷರು ಈ ಸ್ಥಳವನ್ನು ಪರಮಾಣು ಪರೀಕ್ಷಾಸ್ಫೋಟನೆಯ ನೆಲೆ ಮಾಡಿಕೊಂಡಿದ್ದಾರೆ. 1940ರಲ್ಲಿ ಇಲ್ಲಿಯ ಜನಸಂಖ್ಯೆ 42 ಇತ್ತು.

	ಹಿಂದೂ ಸಾಗರದಲ್ಲಿರುವ ಕ್ರಿಸ್ಮಸ್ ದ್ವೀಪ ಜಾವದ ನೈಋತ್ಯಕ್ಕೆ 200 ಮೈ. ದೂರದಲ್ಲಿ (ದ.ಅ. 10ಲಿ, ಪೂ.ರೇ. 105ಲಿ41') ಇದೆ. ರಿಚರ್ಡ್‍ರೋ ಎಂಬ ಬ್ರಿಟಿಷ್ ನಾವಿಕ ಈ ದ್ವೀಪವನ್ನು 1615ರಲ್ಲಿ ಗುರುತಿಸಿದ. ಇದು ಬಹು ಸಣ್ಣ ದ್ವೀಪ. ಇದರ ಉದ್ದ 11 ಮೈ. ಕನಿಷ್ಠ ಅಗಲ 4ಳಿ ಮೈ. ಪೆಸಿಫಿಕ್ ಸಾಗರದಲ್ಲಿನ ಕ್ರಿಸ್ಮಸ್ ದ್ವೀಪದಂತೆ ಈ ದ್ವೀಪವೂ 1888ರಲ್ಲಿ ಬ್ರಿಟನಿನ ವಶಕ್ಕೆ ಬಂತು. 1900ರಲ್ಲಿ ಸಿಂಗಪುರ ನೆಲಸುನಾಡಿಗೆ ಈ ದ್ವೀಪ ಸೇರಿತು. ಇದು ಆಸ್ಟ್ರೇಲಿಯದ ಆಡಳಿತಕ್ಕೆ 1958ರಲ್ಲಿ ಒಳಪಟ್ಟಿತು. ಇಲ್ಲಿ ಹೇರಳವಾಗಿ ಕ್ಯಾಲ್ಸಿಯಂ ಫಾಸ್ಫೇಟ್ ನಿಕ್ಷೇಪಗಳು ಹೇರಳವಾಗಿವೆ. ಇಲ್ಲಿಯ ಬಹು ಜನ ಕ್ಯಾಲ್ಸಿಯಂ ಫಾಸ್ಫೇಟ್ ಗಣಿ ಕೆಲಸದಲ್ಲಿ ನಿರತರಾಗಿದ್ದಾರೆ. ಇದು ಈ ದ್ವೀಪದ ಮುಖ್ಯ ನಿರ್ಯಾತ ವಸ್ತುವಾಗಿದೆ. 						*
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ